DVG’s Letter to Kuvempu

ಮದುವೆಯ ಆಹ್ವಾನಕ್ಕೆ ಪ್ರತಿಯಾಗಿ ಡಿ.ವಿ.ಜಿ. ಅವರು ಬರೆದಿರುವ ಪತ್ರ ವನ್ನು ನೆನೆದು ದಾಖಲಿಸಿರುವ ರಾಷ್ಟ್ರಕವಿ ಕುವೆಂಪು

೨೪ನೆಯ ಮೇ ೧೯೩೭ರಲ್ಲಿ ಶ್ರೀ ಡಿ.ವಿ. ಗುಂಡಪ್ಪನವರು ಬೆಂಗಳೂರು ನಗರದ ಬಸವನಗುಡಿಯಲ್ಲಿರುವ ನಾಗಸಂದ್ರ ರಸ್ತೆಯಿಂದ ಛಂದೋಬದ್ಧವಾದ ಕಾವ್ಯಮಯ ಭಾಷೆಯಲ್ಲಿಯೆ ತಮ್ಮ ಆಶೀರ್ವಾದದ ಓಲೆಯನ್ನು ಬರೆದು ಕಳಿಸಿದ್ದಾರೆ:

ಶ್ರೀಮಂತಕವಿ ಕೆ.ವಿ. ಪುಟ್ಟಪ್ಪ ಕೇಳಿದನು,

ಸಿರಿವರಗಳೊಂದುಮಿಲ್ಲದ ಗುಂಡುರಗಳೆಯನು:-
ಗೆಳೆಯನೆ, ಸ್ವೀಕರಿಪುದೆನ್ನಯಭಿನಂದನೆಯ.
ನಿನ್ನಯಾಹ್ವಾನಮೆನ್ನಯ ಹಸ್ತ ಚಿತ್ತಗಳ
ಮುಟ್ತಿಹುದು. ಸಂತಸಂಬಟ್ಟು ನಾಂ ವಂದಿಪೆನು

ಪರೀಕ್ಷೆಯ ವಿಶೇಷ ಸಾಹಿತ್ಯೋತ್ಸವದ ದುಡಿತ
ವೆನಗೆ ತಪ್ಪಿಸಿತು (ನೀನೇ ಶಂಕೆಪಟ್ಟಂತೆ)
ನಿನ್ನಯ ವಿಶೇಷ ಸಾಹಿತ್ಯೋತ್ಸವದ ಸೊಗವ.
ಕೆಳೆನುಡಿಯ ಬರೆಯಲುಂ ಬಿಡುವಿಲ್ಲದಂತಾಯ್ತು.
ನೀನೀಗಳಾನುಮೀ ಹರಕೆಯನು ಕೊಳ್ಳುವದು:-

ನಿನ್ನ ಬಾಳ್ಗೆರಡನೆಯ ಕಣ್ಣು ಬಂದಿಹುದೀಗ.
ಪೊಸಬಳ್ಳಿಯೊಂದೀಗ ನಿನ್ನಿರವನಪ್ಪಿಹುದು.
ಅದರ ತಳಿರಲರುಗಲ ಸವ ಬೆಡಗು ಬಣ್ಣಗಳು
ನಿನ್ನ ತಿಳಿಗಣ್ಣನಿನ್ನಷ್ಟಗಲವರಳಿಸಲಿ
ಅದರ ಮೆಲ್ಲುಲಿಯ ನಸುನಗೆಯ ಸೆಲೆ ಸುಳುಹುಗಳು
ನಿನ್ನ ಕಿವಿಗಿನ್ನಷ್ಟು ಸೂಕ್ಷ್ಮತೆಯ ಸೇರಿಸಲಿ.
ಅಂತು ನೀಂ ಜಗದ ಬದುಕಿನ ಮಹಿಮೆ ಮರುಮಗಳ
ಕಾಣುತ್ತೆ, ಕೇಳುತ್ತೆ, ಪೇಳುತ್ತಲಿಹುದೆಮಗೆ;
ಆಲಿಸುತೆ, ಬಾಳೊಳ್ಳಿತೆನುತೆ, ನಾಂ ನಲಿಯುವೆವು.
ನಿನ್ನ ಕೊರಲೊಡನೀಗ ಕೊರಲೊಂದು ಸೇರಿಹುದು;
ಅಂತಿನ್ನು ಪೊಸರಾಗದಿಂಬೊಂದು ಹೊಮ್ಮುವುದು;
ಅದು ನಮ್ಮ ಕನ್ನಡದ ಜೀವವನು ತಣಿಸುವುದು.

— ನೆನಪಿನ ದೋಣಿ , ಕುವೆಂಪು

Leave a comment